Tuesday 4 November 2014

ಮನಚುಚ್ಚಿದ ವರದಕ್ಷಿಣೆಯ ಕಥೆ..!

http://prathidina.blogspot.com

'ಉಮ್ಮಾ......ಇಲ್ಲಿ ನೋಡು..!!!ಜೊಹರಾ ಬರೆಯಲು ಬಿಡುವುದಿಲ್ಲ.ತೊಂದರೆ ಕೊಡುತ್ತಿದ್ದಾಳೆ...!!!!'
ಓದುವ ಕೊಠಡಿಯೊಳಗಿನಿಂದ ತನ್ನ ಮಗ ಅನ್ವರ್ ನ ಕೂಗು.!!

'ಜೊಹರಾ.....ಅವನಿಗೆ ತಂಟೆ ಮಾಡ್ಬೇಡ.ಅವನಿಗೆ ತೊಂದರೆ ಕೊಟ್ರೆ ಬಾಪಾ ಫೋನ್ ಮಾಡಿದಾಗ ಹೇಳ್ತೇನೆ ನೋಡು.!!' ಎಂದು ತಾಯಿ ಮುನೀರಾ ಹೇಳಿದ್ದೇ ತಡ..,ಜೊಹರಾ ಮೌನಿಯಾಗಿಯೇ ಬಿಟ್ಟಳು.ತಂದೆ ಅಶ್ರಫ್ ನಿಗೆ ಜೊಹರಾಳೊಂದಿಗಿದ್ದ ಎಲ್ಲಿಲ್ಲದ ಪ್ರೀತಿಯೇ ಅವಳ ಮೌನಕ್ಕೆ ಕಾರಣವಾಗಿತ್ತು.!!!!

ಅಂದ ಹಾಗೆ ಅಶ್ರಫ್-ಮುನೀರಾ ದಂಪತಿಗೆ ಎರಡು ಮಕ್ಕಳು.ಜೊಹರಾ ಮತ್ತು ಅನ್ವರ್.
ದೊಡ್ಡವಳಾದ ಜೊಹರಾ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದಳು.
ಇನ್ನೂ ಚಿಕ್ಕವಳಾಗಿದ್ದರೂ ಕೆಲವೊಂದು ವಿಷಯಗಳನ್ನು ಸ್ವತಃ ಅರ್ಥ ಮಾಡಿಕೊಳ್ಳುತ್ತಿದ್ದಳು.

ಅಶ್ರಫ್ ವಿದೇಶದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು.ಕಾಣಲು ಸುಂದರಿಯಾಗಿದ್ದ ಮುನೀರಾಳನ್ನು ಇಷ್ಟಪಟ್ಟು ಮದುವೆ ಮಾಡಿಕೊಂಡಿದ್ದರೂ ನಂತರ ದಿನಗಳಲ್ಲಿ ವರದಕ್ಷಿಣೆ ಯ ಹೆಸರು ಹೇಳಿ ಕಿರುಕುಳ ನೀಡಲು ಪ್ರಾರಂಭಿಸಿದ್ದನು.

ಮಗ್ರಿಬ್ ನಮಾಝ್ ನಂತರ ಮಕ್ಕಳಿಗೆ ಪಾಠ ಹೇಳಿಕೊಡುವಲ್ಲಿ ತಲ್ಲೀನಳಾಗುತ್ತಿದ್ದಳು ಮುನೀರಾ.
ಈ ಸಮಯದಲ್ಲಿ ವಿದೇಶದಿಂದ ಅಶ್ರಫ್ ನ ಕರೆ ಬರುತ್ತಿತ್ತು.ಫೋನ್ ಬರುವುದಕ್ಕಿಂತ ಮುಂಚೆ ಮುನೀರಾಳ ಮುಖದಲ್ಲಿರುತ್ತಿದ್ದ ಮಂದಹಾಸ ನಂತರ ಇರುತ್ತಿರಲಿಲ್ಲ.
ಮುನೀರಾಳ ಈ ಬದಲಾವಣೆಯನ್ನು ಮಗಳು ಜೊಹರಾ ಗಮನಿಸುತ್ತಿದ್ದಾಳೆ ಎಂಬುವುದು ಮುನೀರಾಳಿಗೆ ತಿಳಿಯದ ಸತ್ಯವಾಗಿತ್ತು.!!!!

ತಮ್ಮ ನಡುವಿನ ಬಿರುಕನ್ನು ಮಕ್ಕಳಿಗೆ ತಿಳಿಯದಂತೆ ಎಚ್ಚರ ವಹಿಸಿದ್ದ ಇಬ್ಬರೂ ಪುಟ್ಟ ಮಗಳು ಜೊಹರಾಳ ಮುಂದೆ ಎಡವಿದ್ದರು ಎಂದಷ್ಟೇ ಹೇಳಬಹುದು.!! ಜೊಹರಾಳು ತಂದೆ-ತಾಯಿಯರ ಈ ಬಿರುಕನ್ನು ಅಂದಾಜಿಸಿದ್ದರೂ ತಿಳಿಯದಂತೆ ನಟಿಸುವಲ್ಲಿ ಯಶಸ್ವಿಯಾಗಿದ್ದಳು.

ತಿಂಗಳೆರಡು ಕಳೆದಾಗ ಅಶ್ರಫ್ ಊರಿಗೆ ಬಂದನು.ತನ್ನ ಜೀವವಾದ ಜೊಹರಾಳಿಗೆ ಇಷ್ಟವಾದ ಚಾಕಲೇಟ್ ಗಳನ್ನು ತಂದಿದ್ದರೂ ಜೊಹರಾಳಿಗೆ ಅದೇನೂ ಬೇಡವಾಗಿತ್ತು.ಇಷ್ಟಪಟ್ಟ ಚಾಕಲೇಟ್ ಗಳ ಪೊಟ್ಟಣದ ಮೇಲೆ ತಾಯಿಯ ಕಣ್ಣೀರನ್ನು ಅವಳು ದೂರದಿಂದಲೇ ಕಾಣುತ್ತಿದ್ದಳು.

ಅದೊಂದು ಶನಿವಾರ.....
ಮಧ್ಯಾಹ್ನ ಶಾಲೆ ಬಿಟ್ಟು ಮನೆ ತಲುಪಿದ ಜೊಹರಾ ಮತ್ತು ಅನ್ವರ್ ನನ್ನು ಎಂದಿನಂತೆ ಮುನೀರಾಳು ಸ್ವೀಕರಿಸಿದಳು.
ಶಾಲೆ ಬಿಟ್ಟು ಬಂದ ನಂತರ ತಾಯಿಯ ಮುಖಕ್ಕೆ ಚುಂಬಿಸುತ್ತಿದ್ದ ಜೊಹರಾಳಿಗೆ ಅಂದು ತಾಯಿಯ ಮುಖದಲ್ಲಿದ್ದ ಬೆರಳಚ್ಚುಗಳನ್ನು ನೋಡಿ ಕಣ್ಣೀರು ಉಕ್ಕಿ ಬಂದಿತ್ತು..!!
ತಾಯಿಯನ್ನು ಬಿಗಿದಪ್ಪಿಕೊಂಡು,'ಉಮ್ಮಾ....ವರದಕ್ಷಿಣೆ ಕೇಳುವ ಒಬ್ಬನೊಂದಿಗೆ ನನ್ನ ಮದುವೆಯನ್ನು ನಿಶ್ಚಯಿಸಿದರೆ ಮಾತ್ರ ನಿನ್ನ ಈ ನೋವನ್ನು ನಾನೂ ಅನುಭವಿಸಲು ಸಾಧ್ಯ.!!'ಎಂದು ಹರಿತವಾದ ಮಾತೊಂದನ್ನು ಹೇಳಿದಾಗ ಮುನೀರಾಳ ಹೃದಯವು ಕಲ್ಲಾಗಿ ಮಾರ್ಪಾಡು ಹೊಂದಿತ್ತು..!!!

ಇದೆಲ್ಲವನ್ನೂ ದೂರದಿಂದ ನೋಡುತ್ತಿದ್ದ ಅಶ್ರಫ್ ನ ಕಣ್ಣುಗಳು ಪಶ್ಚಾತಾಪವನ್ನು ಯಾಚಿಸುತ್ತಿದ್ದರೂ ಪುಟ್ಟ ಮಗು ಜೊಹರಾ ಅಶ್ರಫ್ ನನ್ನು ದುರುಗುಟ್ಟುತ್ತಲೇ ನೋಡುತ್ತಿದ್ದಳು.!!!

ಇದು ಒಬ್ಬಳು ಮುನೀರಾಳ ಕಥೆ.!!!
ಇನ್ನೆಷ್ಟು ಮುನೀರಾಗಳಿರಬಹುದು ನಮ್ಮೆಡೆಯಲ್ಲಿ.??!!
ಮುನೀರಾಳ ಕಣ್ಣೀರಿಗೆ ಕಾರಣವಾದ "ವರದಕ್ಷಿಣೆ" ಎಂಬ ರಾಕ್ಷಸ ಪಿಡುಗು ಇನ್ನೋರ್ವಳು ಮುನೀರಾಳ ಕಣ್ಣೀರಿಗೆ ಕಾರಣವಾಗದಿರಲಿ ಎಂದು ಆಶಿಸೋಣ.ಅಲ್ಲವೇ???

ಸಫ್ವಾನ್ ಅಡ್ಯನಡ್ಕ.

0 comments:

Post a Comment

 
Design by Free WordPress Themes | Bloggerized by - Free Blogger Themes | @javtl